ಬೆಳ್ತಂಗಡಿ
ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕು ಆಡಳಿತ ಕೇಂದ್ರ ಪಟ್ಟಣ. ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಗ್ನೇಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪಶ್ಚಿಮದಲ್ಲಿ ಕಾರ್ಕಳ ಮತ್ತು ಬಂಟ್ವಾಳ ತಾಲ್ಲುಕುಗಳೂ ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು ಸುತ್ತುವರೆದಿದೆ. 1954ರಲ್ಲಿ ರೂಪಿತವಾದ ಈ ತಾಲ್ಲೂಕಿನ ವೇಣೂರು, ಬೆಳ್ತಂಗಡಿ ಮತ್ತು ಕೊಕ್ಕಡ ಇವು ಮೂರು ಹೋಬಳಿಗಳೂ 84 ಗ್ರಾಮಗಳೂ ಇವೆ. ಒಟ್ಟು ವಿಸ್ತೀರ್ಣ 1,375 ಚಕಿಮೀ. ಜನಸಂಖ್ಯೆ 2,46,443 (2001). 

	ತಾಲ್ಲೂಕಿನ ಪೂರ್ವಭಾಗ ಮಲೆನಾಡು. ಪಶ್ಚಿಮ ಘಟ್ಟಗಳ ಕುದುರೆಮುಖ ಶ್ರೇಣಿ ದಕ್ಷಿಣೋತ್ತರವಾಗಿ ಹಬ್ಬಿದೆ. ಪೂರ್ವ ಗಡಿಯಲ್ಲಿ ಚಾರ್ಮಾಡಿಘಾಟ್ ಇದೆ. ಇದರಿಂದ ಚಿಕ್ಕಮಗಳೂರಿಗೆ ಸಂಬಂಧ ಕಲ್ಪಿತವಾಗಿದೆ. ನೇತ್ರಾವತಿ ನದಿ ಈ ತಾಲ್ಲೂಕಿನ ಪರ್ವತಶ್ರೇಣಿಯಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣಾಭಿಮುಖವಾಗಿಯೂ ಅನಂತರ ನೈಋತ್ಯಾಭಿಮುಖವಾಗಿಯೂ ಹರಿಯುತ್ತದೆ. ಹೆಚ್ಚು ಮಳೆಯಾಗುತ್ತದೆ. ವಾರ್ಷಿಕ ಸರಾಸರಿ ಮಳೆ 4,058 ಮಿಮೀ (1971).

	ಇಲ್ಲಿಯ ಘಟ್ಟದ ಭಾಗ ದಟ್ಟ ಅರಣ್ಯದಿಂದ ಕೂಡಿದೆ. ಅರಣ್ಯ ಪ್ರದೇಶದ ವಿಸ್ತೀರ್ಣ 56,411 ಹೆಕ್ಟೇರ್ (1971). ಬೀಟೆ, ತೇಗ, ಮಾವು, ಹತ್ತಿ, ಕಿರಲ್ ಬೋಗಿ, ಹೊನ್ನೆ, ಸೀಗೆ, ಮೆಣಸು, ಶುಂಠಿ, ಏಲಕ್ಕಿ, ದಾಲ್ಜಿನ್ನಿ, ಅಡಕೆ, ಬತ್ತ, ತೆಂಗು, ಗೋಡಂಬಿ ಇವು ಮುಖ್ಯ ಬೆಳೆಗಳು. 

	ತಾಲ್ಲೂಕಿನ ಕೇಂದ್ರವಾಗಿರುವ ಬೆಳ್ತಂಗಡಿ ಮಂಗಳೂರು-ಚಾರ್ಮಾಡಿ-ಕಡೂರು ರಾಜ್ಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಪೂರ್ವಕ್ಕೆ ಸುಮಾರು 60 ಕಿಮೀ ದೂರದಲ್ಲಿದೆ. ಪುತ್ತೂರಿನಿಂದ ಇಲ್ಲಿಗೆ 35 ಕಿಮೀ. ಇದರ ಜನಸಂಖ್ಯೆ 7,302 (2001). ತಾಲ್ಲೂಕು ಕಚೇರಿ, ನ್ಯಾಯಾಲಯ, ಪ್ರಾಥಮಿಕ ಆರೋಗ್ಯಕೇಂದ್ರ, ಸುಧಾರಿತ ಬೀಜಕೇಂದ್ರ, ಮಾರುಕಟ್ಟೆ ಇಲ್ಲಿವೆ. ಎರಡು ಉನ್ನತ ಪ್ರಾಥಮಿಕ ಶಾಲೆಗಳೂ, ಪ್ರೌಢಶಾಲೆಗಳೂ, ಕಿರಿಯ ಕಾಲೇಜೂ ಇವೆ. ಬಂಗರಸರ ಕಾಲದ ಸೋಮನಾಥನ ದೇವಾಲಯ ಬಸದಿಯೂ ಕೋಟೆಯ ಅವಶೇಷಗಳೂ ಇವೆ. ಈ ಊರಿಗೆ ಗ್ರಾಮಪಂಚಾಯಿತಿಯಿದೆ. ಬೆಳ್ತಂಗಡಿಯಿಂದ ಕಾರ್ಕಳ, ಮಂಗಳೂರು, ಚಿಕ್ಕಮಗಳೂರು, ಪುತ್ತೂರು ಈ ಸ್ಥಳಗಳಿಗೆ ರಸ್ತೆಗಳುಂಟು. 

	ಬೆಳ್ತಂಗಡಿಯಿಂದ 12 ಕಿಮೀ ದೂರದಲ್ಲಿರುವ ಆಲ್ದಂಗಡಿಯಲ್ಲಿ ರಾಣಿ ಮದರಕ್ಕನ ಅರಮನೆ, ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳು, ಒಂದು ಬಸದಿ ಇವೆ. ಬೆಳ್ತಂಗಡಿಗೆ 22 ಕಿಮೀ ದೂರದಲ್ಲಿರುವ ಬೈಲಂಗಡಿ ಎಂಬ ಸ್ಥಳದಲ್ಲಿ ರಾಣಿ ಸೋಮಲದೇವಿಯ ಮತ್ತು ಅವಳ ಗಂಡನ ಸಮಾಧಿಗಳಿವೆ. ಒಂದು ಬಸದಿಯೂ ಇದೆ. ಬೆಳ್ತಂಗಡಿಯ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿರುವ ಬಂಗವಾಡಿ ಎಂಬುದು ಬಂಗರಸರ ರಾಜಧಾನಿಯಾಗಿತ್ತು. ಚಾರ್ಮಾಡಿ ಗ್ರಾಮ ಬೆಳ್ತಂಗಡಿಯ ಪೂರ್ವಕ್ಕೆ 19 ಕಿಮೀ ದೂರದಲ್ಲಿದೆ. ಉಜಿರೆ ಎಂಬಲ್ಲಿ ಕಾಲೇಜು, ಹೈಸ್ಕೂಲು, ಗುರುಕುಲಗಳಿವೆ. ಇದು ಧರ್ಮಸ್ಥಳದ ಬಾಗಿಲಿನಂತಿದೆ. ಧÀರ್ಮಸ್ಥಳ ಬೆಳ್ತಂಗಡಿಯಿಂದ 16 ಕಿಮೀ ದೂರದಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲಿ ಮಂಜುನಾಥ ದೇವಾಲಯವಿದೆ. 

	ಬೆಳ್ತಂಗಡಿಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಗಡಾಯಿಕಲ್ಲು ಎಂಬ ಕೋಟೆ ಇರುವ ಒಂದು ದೊಡ್ಡ ಕಲ್ಲುಬಂಡೆ ಇದೆ. ಈ ಸೀಮೆಯಲ್ಲಿ ಆಳಿದ ಬಲ್ಲಾಳರಾಜರಲ್ಲಿ ಒಬ್ಬನಾದ ನರಸಿಂಹವರ್ಮ ಈ ಬೆಟ್ಟದಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಅದರ ಸುತ್ತಲೂ ಒಂದು ಪಟ್ಟಣವನ್ನು ನಿರ್ಮಿಸಿದ. ಶ್ರೀರಂಗಪಟ್ಟಣದ ಯುದ್ಧದವರೆಗೆ ಒಳ್ಳೆಯ ಸ್ಥಿತಿಯಲ್ಲಿದ್ದ ಈ ಪಟ್ಟಣಕ್ಕೆ ನರಸಿಂಹಗಡವೆಂದು ಹೆಸರಾಯಿತು. ಟಿಪ್ಪುಸುಲ್ತಾನ ಕೋಟೆಯನ್ನು ಬಲಪಡಿಸಿ ತನ್ನ ತಾಯಿಯ ನೆನಪಾಗಿ ಈ ಸ್ಥಳಕ್ಕೆ ಜಮಾಲಾಬಾದ್ ಎಂಬ ಹೆಸರಿಟ್ಟ. 

	ಬೆಳ್ತಂಗಡಿ ತಾಲ್ಲೂಕಿನ ಇನ್ನೊಂದು ಮುಖ್ಯಸ್ಥಳ ವೇಣೂರು (ಬೆಳ್ತಂಗಡಿಯಿಂದ 19 ಕಿಮೀ) ಒಂದು ಜೈನಕ್ಷೇತ್ರ. ಗುರುಪುರ (ಫಲ್ಗುಣ) ಹೊಳೆಯ ದಡದಲ್ಲಿರುವ ಈ ಪಟ್ಟಣ ಹಿಂದೆ ಜೈನ ಅರಸರ ರಾಜಧಾನಿಯಾಗಿತ್ತು. ಇಲ್ಲಿ ಸುಮಾರು 11 ಮಿ ಎತ್ತರದ ಗೋಮಟ ವಿಗ್ರಹವಿದೆ. 
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ